ಮಾಧವ -
ಈ ಹೆಸರಿನಲ್ಲಿ ಪ್ರಸಿದ್ಧರಾದ ಮೂವರು ಗಂಗ ಅರಸರ ಬಗ್ಗೆ ಮುಂದೆ ಕೊಡಲಾಗಿದೆ.

ಮಾಧವ I: ತಲಕಾಡು ಗಂಗ ವಂಶದ ರಾಜ (ಸು 350-75). ಮೊದಲ ಗಂಗ ಅರಸರ ವಂಶಾವಳಿಯ ಬಗ್ಗೆ ದೊರಕುವ ಮಾಹಿತಿಗಳು ಸಂದಿಗ್ಧವಾಗಿರುವುದರಿಂದ ಆ ವಂಶಾವಳಿಯಲ್ಲಿ ಇವನ ಸ್ಥಾನದ ಬಗ್ಗೆಯೂ ಆಳ್ವಿಕೆಯ ಕಾಲದ ಬಗ್ಗೆಯೂ ಅನೇಕ ಅಭಿಪ್ರಾಯಗಳಿವೆ. ಬಹುತೇಕ ನಾಲ್ಕನೆಯ ಶತಮಾನದಲ್ಲೇ ಇವನು ಆಳಿರಬೇಕೆಂಬುದನ್ನು ಅವು ಒಪ್ಪುತ್ತವೆ.

ನಾಲ್ಕನೆಯ ಶತಮಾನದ ಮಧ್ಯಭಾಗದಲ್ಲಿ ದಕ್ಷಿಣ ಭಾರತದ ಪೂರ್ವಭಾಗದಲ್ಲಿ ಪ್ರಬಲರಾಗಿದ್ದ ಪಲ್ಲವರಿಗೂ ಕರ್ನಾಟಕದ ಪಶ್ಚಿಮ ಮತ್ತು ಉತ್ತರ ಭಾಗದಲ್ಲಿ ಹೊಸದಾಗಿ ರಾಜ್ಯಸ್ಥಾಪಿಸಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕದಂಬರಿಗೂ ವೈರತ್ವವಿದ್ದುದು ಮತ್ತು ಆಂಧ್ರ ಪ್ರದೇಶದ ಭಾಗಗಳನ್ನು ಆಳುತ್ತಿದ್ದ ಬಾಣರು ದುರ್ಬಲರಾಗುತ್ತಿದ್ದುದು-ಈ ಕಾರಣಗಳಿಂದ ಕರ್ನಾಟಕದ ದಕ್ಷಿಣ ಭಾಗದಲ್ಲಿ ಮತ್ತು ಈಗಿನ ಆಂಧ್ರದ ದಕ್ಷಿಣ ಭಾಗದಲ್ಲಿ ಅರಾಜಕತೆ ಏರ್ಪಟ್ಟಿತ್ತು. ಈ ಸಂದರ್ಭವನ್ನು ಉಪಯೋಗಿಸಿಕೊಂಡ ಮಾಧವ ಪಲ್ಲವರ ಸ್ನೇಹಗಳಿಸಿ ಬಾಣರನ್ನು ಸೋಲಿಸಿ ಕದಂಬರ ಪ್ರದೇಶಗಳನ್ನು ಆಕ್ರಮಿಸಿ ಗಂಗ ರಾಜ್ಯ ಸ್ಥಾಪಿಸಿದ ಎಂಬುದು ಇತ್ತೀಚಿನ ಅಭಿಪ್ರಾಯ.

ಒಂದನೆಯ ಮಾಧವನನ್ನು ಜಾಹ್ಮವೇಯ ಕುಲ ಅಥವಾ ಗಂಗ ವಂಶದ ಬಾಂದಳದಲ್ಲಿ ಶೋಭಿಸುವ ಸೂರ್ಯ, ಕ್ರೂರ ಶತ್ರುಸಮೂಹವನ್ನು ಅನೇಕ ಯುದ್ಧಗಳಲ್ಲಿ ಜಯಿಸಿದವ ಇತ್ಯಾದಿಯಾಗಿ ಶಾಸನಗಳಲ್ಲಿ ವರ್ಣಿಸಲಾಗಿದೆ. ಇವನು ಶಿಲಾಸ್ತಂಭವನ್ನು ಒಂದೇ ಏಟಿಗೆ ತುಂಡರಿಸಿ ಬಲವನ್ನೂ ಖ್ಯಾತಿಯನ್ನೂ ಗಳಿಸಿದನೆಂದೂ ಸ್ವಬಾಹುಬಲದಿಂದ ರಾಜ್ಯ ಸ್ಥಾಪಿಸಿದನೆಂದೂ ಮುನಿ ಗುರು ಮತ್ತು ದೇವತೆಗಳಿಗೆ ಪೂಜೆಸಲ್ಲಿಸುವಲ್ಲಿ ಶ್ರದ್ಧೆಯುಳ್ಳವನಾಗಿದ್ದನೆಂದೂ ಹೇಳಲಾಗಿದೆ. ಇವನು ಸ್ವಪರಾಕ್ರಮದಿಂದ ರಾಜ್ಯ ಸ್ಥಾಪಿಸಿ ಸದ್ಧರ್ಮದಿಂದ ಅದನ್ನು ನಡೆಸಿಕೊಂಡು ಬಂದ. ಒಂದನೆಯ ಮಾಧವನಿಗೆ ಕೊಂಗುಣಿವರ್ಮ ಎಂಬ ಬಿರುದಿನ ಜೊತೆಗೆ ಕೊಂಕಣಿವರ್ಮ ಕೊಂಗುಲಿವರ್ಮ, ಜಯಭೂಷಣ, ಬಾಣಕುಲಾಂತಕ ಮುಂತಾದ ಬಿರುದುಗಳಿದ್ದುವು. ಮಾಧವ ಕೋಲಾರದಿಂದ ಕೊಂಕಣದವರೆಗೂ ಈಗಿನ ಮೈಸೂರು ಜಿಲ್ಲೆಯಿಂದ ಸೇಲಮ್‍ವರೆಗೂ ರಾಜ್ಯ ವಿಸ್ತರಿಸಿದ್ದಿರಬಹುದೆಂದು ಶಾಸನಗಳ ಆಧಾರದಿಂದ ಊಹಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಮಂಡಲಿಯ ಬಳಿ ಇವನು ಒಂದು ಚೈತ್ಯಾಲಯವನ್ನು ಕಟ್ಟಿಸಿದನೆಂಬುದು ಲೂಯಿ ರೈಸ್ ಅವರ ಅಭಿಪ್ರಾಯ.

ಇವನ ಮರಣಾನಂತರ ಮಗ ಹರಿವರ್ಮ ಪಟ್ಟಕ್ಕೆ ಬಂದ. ಮಾಧವನಿಗೆ ಮಕ್ಕಳಿರಲಿಲ್ಲವಾದ್ದರಿಂದ ದಡಿಗನ ಮಗ ಎರಡನೆಯ ಮಾಧವ ಇವನ ಉತ್ತರಾಧಿಕಾರಿಯಾದ ಎಂಬ ಇನ್ನೊಂದು ಅಭಿಪ್ರಾಯವೂ ಇದೆ.

ಮಾಧವ II: ತಲಕಾಡು ಗಂಗವಂಶದ ರಾಜ (ಸುಮಾರು 400-20). ಶಾಸನಗಳಲ್ಲಿ ಇವನನ್ನು ಮಾಧವ ಮಹಾಧಿರಾಜನೆಂದು ಸಂಬೋಧಿಸಲಾಗಿದೆ. ಇವನಿಗೆ ಕಿರಿಯ ಮಾಧವನೆಂಬ ಅಭಿದಾನವೂ ಇತ್ತು. ಇವನು ಒಂದನೆಯ ಮಾಧವನ ಮೊಮ್ಮಗ, ಆರ್ಯವರ್ಮನ ಮಗ ಮತ್ತು ಉತ್ತರಾಧಿಕಾರಿ. ಇವನಿಗೆ ಸಿಂಹವರ್ಮ ಎಂಬ ಇನ್ನೊಂದು ಹೆಸರೂ ಇತ್ತು. ಇವನು ಪಲ್ಲವ ಸ್ಕಂದವರ್ಮನಿಂದ ಅಭಿಷಿಕ್ತನಾದ ಎಂದು ತಿಳಿಯಲಾಗಿದೆ. ಆದರೆ ಲೂಯಿ ರೈಸ್ ಮತ್ತಿತರರು ಗಂಗರ ಪ್ರಥಮ ರಾಜನನ್ನು ಒಂದನೆಯ ಮಾಧವನೆಂದೂ ಈ ಮಾಧವ ಅವನ ಉತ್ತರಾಧಿಕಾರಿಯೆಂದೂ ಅಭಿಪ್ರಾಯಪಟ್ಟಿದ್ದಾರೆ. ದುಬ್ರಾಯಿಯವರು ಈ ಮಾಧವ ಗಂಗವಂಶದ ಈ ಮೇಲಿನ ವಿವರಣೆಗಳು ಮೂರನೆಯ ಮಾಧವನಿಗೆ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ. ಎರಡನೆಯ ಮಾಧವನ ಆಳ್ವಿಕೆಯ ಕಾಲದ ಬಗ್ಗೆಯೂ ಭಿನ್ನಾಭಿಪ್ರಾಯವಿದೆ. ಆದರೆ ಎಲ್ಲ ಮುಖ್ಯ ಅಭಿಪ್ರಾಯಗಳೂ ಸಾಮಾನ್ಯವಾಗಿ ಸುಮಾರು 400ರ ಆಸುಪಾಸಿನಲ್ಲಿವೆ.

ಈ ಕಾಲದಲ್ಲಿ ನಡೆದ ರಾಜಕೀಯ ಘಟನೆಗಳು ನಿರ್ದಿಷ್ಟವಾಗಿ ತಿಳಿದುಬರುವುದಿಲ್ಲ. ಈತನ ಸದ್ಗುಣಗಳನ್ನು ಮತ್ತು ಪಾಂಡಿತ್ಯವನ್ನು ಶಾಸನಗಳಲ್ಲಿ ಕೊಂಡಾಡಲಾಗಿದೆ. ಪ್ರಜಾಕಲ್ಯಾಣ ಸಾಧನೆಯೇ ಇವನ ರಾಜ್ಯಭಾರದ ಗುರಿಯಾಗಿತ್ತು. ಇವನು ಗುರು. ಬ್ರಾಹ್ಮಣ ಸೇವಾನಿರತ, ವಿದ್ಯವಿನಯ ಸಂಪನ್ನ, ಉಪನಿಷತ್‍ಗಳು ಮತ್ತು ನೀತಿಶಾಸ್ತ್ರಗಳಲ್ಲಿ ಪಾರಂಗತ, ವಿವಿಧ ಶಾಸ್ತ್ರಜ್ಞಾನಿ, ರಾಜ್ಯನೀತಿ ನಿಪುಣ, ಕಲೆ ಸಾಹಿತ್ಯಗಳ ಪೋಷಕ-ಇತ್ಯಾದಿಯಾಗಿ ಶಾಸನಗಳು ವರ್ಣಿಸಿವೆ. ಇವನು ದತ್ತಕಸೂತ್ರಕ್ಕೆ ವ್ಯಾಖ್ಯಾನ ಬರೆದಿದ್ದನೆಂಬುದು ಕೆಲವು ಶಾಸನಗಳ ಉಕ್ತಿ. ಆದರೆ ಆ ಕೃತಿ ದೊರೆತಿಲ್ಲ.

ಮಾಧವ III: ಗಂಗ ವಂಶದ ರಾಜ (ಸು. 440-69) ವಿಷ್ಣುಗೋಪನ ಮಗ. ಇವನಿಗೆ ತಡಂಗಾಲ ಮಾಧವನೆಂಬ ಅಡ್ಡ ಹೆಸರೂ ಉಂಟು. ಇವನ ಕಾಲು ಊನವಾಗಿದ್ದುದೇ ಇವನಿಗೆ ಹೀಗೆ ಹೆಸರು ಬರಲು ಕಾರಣವೆನ್ನಲಾಗಿದೆ.

ಮೂರನೆಯ ಮಾಧವನ ಕಾಲದಲ್ಲಿ ಪಲ್ಲವರೂ ಕದಂಬರೂ ಗಂಗರೊಡನೆ ಸ್ನೇಹ ಬೆಳೆಸಿದ್ದರು. ಕೆಲವು ಹೇಳಿಕೆಗಳ ಪ್ರಕಾರ ಪಲ್ಲವ ಸ್ಕಂದವರ್ಮ ಸ್ವಹಸ್ತದಿಂದ ಪಟ್ಟಗಟ್ಟಿದ ಗಂಗ ದೊರೆ ಮಾಧವ ಇವನೇ. ಇವನು ಒಂದನೆಯ ಕದಂಬ ಕೃಷ್ಣ ವರ್ಮನ ಸಹೋದರಿಯನ್ನು ವಿವಾಹವಾಗಿದ್ದ ವಿಷಯ ಅನೇಕ ಶಾಸನಗಳಿಂದ ತಿಳಿಯುತ್ತದೆ. ಈ ವಿವಾಹ ರಾಜಕೀಯ ಮಹತ್ತ್ವದಿಂದ ಕೂಡಿದ್ದಿತು. ಗಂಗರಿಗೂ ಕದಂಬರಿಗೂ ಪ್ರಾರಂಭದಿಂದಲೂ ವೈಮನಸ್ಸು ಬೆಳೆದಿತ್ತು. ಗಂಗರು ಪಲ್ಲವರ ಬೆಂಬಲದಿಂದ ಕದಂಬ ಪ್ರದೇಶಗಳನ್ನು ಆಕ್ರಮಿಸಿದ್ದರು. ವಿಷ್ಣುಗೋಪನ ಕಾಲದಲ್ಲಿ ಗಂಗರು ಸ್ವಲ್ಪಮಟ್ಟಿಗೆ ದುರ್ಬಲರಾದಂತೆ ಕಂಡರೂ ಮಾಧವನ ಕಾಲಕ್ಕೆ ಶಕ್ತಿಸಾಮಥ್ರ್ಯಗಳನ್ನು ಗಳಿಸಿಕೊಂಡರು. ಗಂಗರಿಂದ ತಮಗೆ ಒದಗಬಹುದಾದ ಅಪಾಯವನ್ನು ಮುಂಗಂಡ ಕದಂಬರು ಈ ವಿವಾಹ ಸಂಬಂಧದಿಂದ ಮೈತ್ರಿ ಬೆಳೆಸಲು ಬಯಸಿದ್ದಿರಬಹುದು. ಒಟ್ಟಿನಲ್ಲಿ ಈ ಘಟನೆ ಗಂಗ ಮನೆತನದ ಪ್ರತಿಷ್ಠೆಯನ್ನು ಹೆಚ್ಚಿಸಿತು. ಮೂರನೆಯ ಮಾಧವ ಆಂತರಿಕವಾಗಿ ಗಂಗರಾಜ್ಯವನ್ನು ಬಲಪಡಿಸಲು ಕಾರಣನಾದ. ಎರಡನೆಯ ಮಾಧವನ ತರುವಾಯ ಪರುವಿ ಮತ್ತು ಕೈವಾರ ಶಾಖೆಗಳಲ್ಲಿ ಸೇರಿಹೋಗಿದ್ದ ರಾಜ್ಯದ ಭಾಗಗಳನ್ನು ಇವನು ಮುಖ್ಯ ಶಾಖೆಯಾದ ತಲಕಾಡು ವಂಶದ ಕಕ್ಷೆಗೆ ತಂದು ಗಂಗರಾಜ್ಯವನ್ನು ಪುನಃ ಒಂದುಗೂಡಿಸಿದ. ಶೃಂಗೇರಿ, ನೊಣಮಂಗಲ ಮತ್ತಿತರ ಶಾಸನಗಳಿಂದ ಇವನು ತನ್ನ ರಾಜ್ಯ ವಿಸ್ತರಿಸಿದ್ದಾಗಿ ತಿಳಿದು ಬರುತ್ತದೆ. ದೊಡ್ಡಬಳ್ಳಾಪುರ ಶಾಸನಗಳಲ್ಲಿ ಸ್ವಬಲ ಪರಾಕ್ರಮದಿಂದ ಇವನು ತನ್ನ ರಾಜ್ಯವನ್ನು ಕೊಂಡುಕೊಂಡನೆಂದು ಹೇಳಲಾಗಿದೆ.

ಇವನೊಬ್ಬ ಶಿವಭಕ್ತ, ಆದರೂ ರಾಜಧರ್ಮಕ್ಕನುಗುಣವಾಗಿ ಇತರ ಮತಪಂಥಗಳನ್ನು ಪ್ರೋತ್ಸಾಹಿಸಿದ. ಇವನು ಬೌದ್ಧವಿಹಾರಕ್ಕೆ ದಾನ ಕೊಟ್ಟ ಸಂಗತಿ ಮೆಳೆಕೋಟೆ ಶಾಸನದಿಂದ ತಿಳಿದುಬರುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ